ಸಂ.ಶಿ.ಭೂಸನೂರಮಠ, 	
1910-. ಸಾಹಿತ್ಯ ಸಂಶೋಧಕರು ಹಾಗೂ ಘನವಿದ್ವಾಂಸರು. ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರ ಪೂರ್ಣ ಹೆಸರು. ಹುಟ್ಟಿದ್ದು ರೋಣ ತಾಲ್ಲೂಕಿನ ನಿಡುಗುಂದಿಯಲ್ಲಿ. ಆರಂಭ ಶಿಕ್ಷಣವನ್ನು ನಿಡಗುಂದಿ, ಗದಗ, ಹುಬ್ಬಳ್ಳಿಗಳಲ್ಲಿ ಮುಗಿಸಿ 1931ರಲ್ಲಿ ಉನ್ನತ ಶ್ರೇಣಿಯಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗಮಾಡಿ 1935ರಲ್ಲಿ ಬಿ.ಎ.ಆನರ್ಸ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ಆಗ ಇವರಿಗೆ "ವಿದ್ಯಾರಣ್ಯ" ಬಹುಮಾನ ದೊರೆಯಿತು. ಕರ್ನಾಟಕ ಕಾಲೇಜಿನ ಫೆಲೊ ಕೂಡ ಆದರು. ಅನಂತರ ಮುಂಬಯಿ ವಿಶ್ವವಿದ್ಯಾಲಯ ಸೇರಿ ಎಂ.ಎ. (ಕನ್ನಡ) ಪದವಿ ಪರೀಕ್ಷೆಯಲ್ಲಿ ಮೊದಲಿಗರಾಗಿ ತೇರ್ಗಡೆ ಹೊಂದಿದರು.

	1939-42ರಲ್ಲಿ ಇವರು ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಅನಂತರ ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು (1943-66). ಈ ಅವಧಿಯಲ್ಲಿ ಇವರು ಕನ್ನಡದ ಅನೇಕ ಉದ್ಗ್ರಂಥಗಳನ್ನು ಸಂಶೋಧಿಸಿ, ಪರಿಷ್ಕರಿಸಿ ಪ್ರಕಟಿಸುವ ಕೆಲಸ ಮಾಡಿದರು. ಅಲ್ಲಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು, ಅಲ್ಲಿಯೂ ಕನ್ನಡ ಅಧ್ಯಯನ ಪೀಠದಲ್ಲಿ ವೀರಶೈವ ಸಾಹಿತ್ಯ ಮತ್ತು ಧರ್ಮಪೀಠದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು (1966-71). ನಿವೃತ್ತರಾದ ಮೇಲೆ ಅಲ್ಲಿಯೇ ವಿಶ್ವವಿದ್ಯಾಲಯ ಅನುದಾನ ಆಯೋಗದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದರು (1971-76). ಅಲ್ಲದೆ ಕರ್ನಾಟಕ, ಮುಂಬಯಿ, ಪೂನಾ, ಶಿವಾಜಿ, ಮೈಸೂರು, ಬೆಂಗಳೂರು, ಉಸ್ಮಾನಿಯ ಮತ್ತು ಕೇರಳ ವಿಶ್ವವಿದ್ಯಾನಿಯಲಗಳ ವಿವಿಧ ಅಧ್ಯಯನ ಮಂಡಲಿಗಳಲ್ಲಿ ನಾನಾ ಹಂತಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕಲಾ ವಿಭಾಗದ ಡೀನ್ ಆಗಿಯೂ ಇದ್ದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ಪರಿಷ್ಕøತ ನಿಘಂಟಿನ ಸಂಪಾದಕ ಸಮಿತಿಯ ಸದಸ್ಯರಾಗಿಯೂ ಕೆಲಸಮಾಡುತ್ತಿದ್ದಾರೆ. 

	ಇವರ ಸಾಹಿತ್ಯ ಸೇವೆಯನ್ನು ಗಮನಿಸಿದ ಕರ್ನಾಟಕ ಸರ್ಕಾರ ರಾಜ್ಯ ಸಾಹಿತ್ಯ ಆಕಾಡೆಮಿ (1969) ಪ್ರಶಸ್ತಿ ನೀಡಿ ಗೌರವಿಸಿದೆ. ಶೂನ್ಯ ಸಂಪಾದನೆಯ ಪರಾಮರ್ಶೆ ಎಂಬ ಇವರ ಗ್ರಂಥಕ್ಕೆ 1971ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

	ಘನಮಠದ ಶಿವಯೋಗಿಗಳ ಭಕ್ತಿ ಸುಧಾಸಾರ (1945); ಸಿದ್ಧನಂಜೇಶನ ಗುರುರಾಜ ಚಾರಿತ್ರ (1950); ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯಮ್ಮನವರ ವಚನಗಳು (1950); ಗೌರವಾಂಕನ ಮೋಳಿಗೆಯ್ಯನ ಪುರಾಣ (1951); ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ (1957); ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ (1958); ಮಹಾಲಿಂಗದೇವನ ಏಕೋತ್ತರ ಶತಸ್ಥಳ (1974); ಕಲ್ಲುಮಠದ ಪ್ರಭುದೇವರ ಲಿಂಗಲೀಲಾ ವಿಲಾಸ ಚಾರಿತ್ರ (1956) - ಇವು ಭೂಸನೂರಮಠ ಅವರು ಪರಿಷ್ಕರಿಸಿ ಸಂಪಾದಿಸಿರುವ ಪ್ರಮುಖ ಗ್ರಂಥಗಳು. ಕರ್ನಾಟಕ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕøತಿ ಅಭಿವೃದ್ಧಿ ಇಲಾಖೆಗಾಗಿ ವಚನ ಸಾಹಿತ್ಯ ಸಂಗ್ರಹವನ್ನು (1965) ಸಂಗ್ರಹಿಸಿ ಕೊಟ್ಟಿದ್ದಾರೆ. ಶೂನ್ಯಸಂಪಾದನೆಯ ಪರಾಮರ್ಶೆ (1969) - ಇದು ಇವರ ಮೌಲಿಕ ಗ್ರಂಥ, ಸಾವಿರ ಪುಟಗಳ ಹೆಬ್ಬೊತ್ತಿಗೆ. ಸಮಕಾಲೀನ ಪ್ರಜ್ಞೆ, ವೈe್ಞÁನಿಕ ಮುನ್ನೋಟ, ಮಾನವತೆಯ ಶಾಶ್ವತ ಮೌಲ್ಯ ನಿರ್ಣಯಗಳ ಚಿಂತನೆ ಈ ಮಹತ್ಕøತಿಯಲ್ಲಿ ಮೂಡಿವೆ. ಆಧುನಿಕ ತತ್ತ್ವ ಜಗತ್ತಿನ ಜ್ವಲಂತ ಪ್ರಶ್ನೆಗಳ, ಜೀವನದ ನಿತಾಂತ ಸಮಸ್ಯೆಗಳ ಸಜೀವ ಪ್ರತಿಕ್ರಿಯೆ ಹಾಗೂ ಅವನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಈ ಪರಾಮರ್ಶೆ. ವೀರಶೈವಧರ್ಮ ಮತ್ತು ದರ್ಶನದ ಒಂದು ಸಮಗ್ರ ವಿವೇಚನೆಯಿರುವ ಈ ಗ್ರಂಥದಲ್ಲಿ ಹಲವಾರು ಪ್ರಾಚ್ಯತಾತ್ತ್ವಿಕ ಗ್ರಂಥಗಳ ಸಮೀಕ್ಷೆಯಿದೆಯಲ್ಲದೆ ಆಧುನಿಕ ವೈe್ಞÁನಿಕ ವಿಚಾರಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಈ ಗ್ರಂಥ ಭಾರತೀಯ ತತ್ತ್ವ ಸಾಹಿತ್ಯಕ್ಕೆ ಕರ್ನಾಟಕ ನೀಡಿರುವ ವಿಶೇಷ ಕಾಣಿಕೆ. ಈ ಗ್ರಂಥವನ್ನು ಕುರಿತು 1974ರಲ್ಲಿ ಪರಾಮರ್ಶೆಯ ವಿಮರ್ಶೆ ಎಂಬ ವಿಮರ್ಶಾಗ್ರಂಥವೂ ಪ್ರಕಟವಾಗಿದೆ.

	ಭೂಸನೂರಮಠ ಅವರು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಶೂನ್ಯಸಂಪಾದನೆಯನ್ನು ಲಿಪ್ಯಂತರ ಮತ್ತು ಇಂಗ್ಲಿಷ್ ಭಾಷಾಂತರಗಳೊಂದಿಗೆ ಪ್ರಕಟಿಸುವ ಕರ್ನಾಟಕ ವಿಶ್ವವಿದ್ಯಾಲಯದ ಯೋಜನೆಯಲ್ಲಿ ಪಾಲುಗೊಂಡು ವಿದ್ವತ್ಪೂರ್ಣವೂ ಅನುಭಾವಯುಕ್ತವೂ ಆದ ಸೇವೆಯನ್ನು ಸಲ್ಲಿಸಿ ನಾಲ್ಕು ಸಂಪುಟಗಳನ್ನು ಹೊರತಂದರು. ಐದನೆಯ ಸಂಪುಟದ ಕಾರ್ಯ ಮುಗಿಯುವ ವೇಳೆಗೆ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದರು. ಅಮೂಲ್ಯವಾದ ಪೀಠಿಕೆ ಉಪಯುಕ್ತ ಅನುಬಂಧಗಳಿರುವ ಈ ಸಂಪುಟಗಳು ಶೂನ್ಯಸಂಪಾದನೆಯ ಮಹತ್ತ್ವವನ್ನು ಕನ್ನಡೇತರರೂ ಪಾಶ್ಚಾತ್ಯರೂ ಅರಿತುಕೊಳ್ಳುವುದಕ್ಕೆ ತುಂಬ ಉಪಯುಕ್ತವಾಗಿವೆ.

	ಕಾಶ್ಮೀರದಿಂದ ಕಲ್ಯಾಣಕ್ಕೆ ಎಂಬುದು ಇವರ ಇನ್ನೊಂದು ಗ್ರಂಥ. ಇದರಲ್ಲಿ ಕಾಶ್ಮೀರದ ಅರಸು ಮಹಾದೇವ ಭೂಪಾಲ ಮತ್ತು ಆತನ ರಾಣಿ ಗಂಗಾದೇವಿ ಅಥವಾ ಮಹಾದೇವಿ ಇವರುಗಳು ತಮ್ಮ ಅರಸೊತ್ತಿಗೆಯನ್ನು ಬಿಟ್ಟು ಬಸವಣ್ಣನ ವಿಚಾರ ಕ್ರಾಂತಿಗೆ ಮನಸೋತು ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ಹಿಡಿದು ಜೀವ ಸವೆಸಿ, ಶ್ರೇಷ್ಠ ಶರಣ ದಂಪತಿಗಳಾಗಿ ಬಾಳಿದ ಚಿತ್ರಣವಿದೆ. ಅವರ ವಚನಗಳ ಆಧಾರದಿಂದಲೇ ಅವರ ಜೀವನ ಚಿತ್ರವನ್ನು ಬಿಡಿಸಲಾಗಿದೆ. 

	ಭವ್ಯ ಮಾನವ, ಆಧುನಿಕ ಕನ್ನಡ ಮಹಾಕಾವ್ಯಗಳ ಪೈಕಿ ಒಂದು ಐದುಮಾತ್ರೆಯ ಗಣಗಳಲ್ಲಿ ಓಡುವ ಈ ಕಾವ್ಯದ ಹರವು ಎಂಟನೂರ ಮೂವತ್ತೆರಡು ಪುಟಗಳು ಇಪ್ಪತ್ತು ಸಾವಿರ ಪಂಕ್ತಿಗಳು. ಈ ಕಾವ್ಯದ ಕಥಾವಸ್ತು ವಚನಕಾರ್ತಿ ಶಿವಶರಣೆ ಮಹಾದೇವಿಯಕ್ಕನ ಜೀವನ-ಬದುಕು. ಅಕ್ಕನ ಬದುಕಿನ ಸಮಗ್ರ ಧ್ಯಾನವೇ ಇಲ್ಲಿ ಕಾವ್ಯವಾಗಿ ಹರಿದಿದೆ. ಈ ಮಹಾಕಾವ್ಯ ಕಲ್ಯಾಣಕಾಂಡ, ಶ್ರೀಶೈಲಕಾಂಡ ಉದಯಕಾಂಡ, ಉಜ್ಜ್ವಲಕಾಂಡ, ಭವ್ಯಕಾಂಡ ಎಂದು ಆರುಭಾಗಗಳಲ್ಲಿ ವಿಭಜನೆಗೊಂಡಿದೆ. ಇದು ಮಹಾದೇವಿಯಕ್ಕನನ್ನು ಕುರಿತ ಕಾವ್ಯವಾದರೂ ಮಾನವನ ಹುಟ್ಟಿನಿಂದ ಹಿಡಿದು ಇಲ್ಲಿನ ತನಕದ ವಿಕಾಸವನ್ನೇ ಉದ್ದಕ್ಕೂ ಗಮನಿಸಬಹುದು. ಸಮಸ್ತ ಮನುಕುಲದ ಏಳಿಗೆಯನ್ನು ಗುರುತಿಸುತ್ತ ಅದರಲ್ಲಿ ವಿಶ್ವತತ್ತ್ವಗಳು ಅಡಕವಾಗಿರುವುದನ್ನು ಅರಿಯಬಹುದು. ಇದೊಂದು ಕನ್ನಡದ ಅಪೂರ್ವ ಕೃತಿ. 			
		(ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ